anjalyjayakrishnan's picture
kannada raw data
32165da
Book_Chapter_Verse,Text
2TI_001_001,"ಕ್ರಿಸ್ತಯೇಸುವಿನಲ್ಲಿರುವ ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು,"
2TI_001_002,"ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ."
2TI_001_003,ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ ಸ್ತೋತ್ರಸಲ್ಲಿಸುತ್ತೇನೆ.
2TI_001_004,ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.
2TI_001_005,ನಿನ್ನಲ್ಲಿರುವ ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
2TI_001_006,ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ.
2TI_001_007,"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ."
2TI_001_008,"ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು."
2TI_001_009,"ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ,"
2TI_001_010,ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.
2TI_001_011,"ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು."
2TI_001_012,ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು ಆತನು ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.
2TI_001_013,"ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು."
2TI_001_014,ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.
2TI_001_015,ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.
2TI_001_016,"ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡದೆ,"
2TI_001_017,ರೋಮಾಪುರಕ್ಕೆ ಬಂದಕೂಡಲೆ ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು.
2TI_001_018,ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.
2TI_002_001,"ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು."
2TI_002_002,"ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು."
2TI_002_003,ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.
2TI_002_004,"ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ."
2TI_002_005,ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ.
2TI_002_006,ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.
2TI_002_007,ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.
2TI_002_008,"ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ."
2TI_002_009,ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
2TI_002_010,ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.
2TI_002_011,"ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು,"
2TI_002_012,ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
2TI_002_013,ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು. ಆತನು ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”
2TI_002_014,"ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು."
2TI_002_015,ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.
2TI_002_016,"ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು."
2TI_002_017,ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.
2TI_002_018,ಅವರು ಸತ್ಯಭ್ರಷ್ಟರಾಗಿ ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.
2TI_002_019,ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.
2TI_002_020,"ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ."
2TI_002_021,"ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು."
2TI_002_022,"ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು."
2TI_002_023,ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
2TI_002_024,"ಕರ್ತನ ಸೇವಕನು ಜಗಳವಾಡದೆ, ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ"
2TI_002_025,ಎದುರಿಸುವವರನ್ನು ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.
2TI_002_026,ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.
2TI_003_001,ಆದರೆ ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ.
2TI_003_002,"ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ,"
2TI_003_003,"ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ,"
2TI_003_004,"ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ,"
2TI_003_005,ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.
2TI_003_006,"ಅವರಲ್ಲಿ ಕೆಲವರು ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ."
2TI_003_007,ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.
2TI_003_008,"ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ."
2TI_003_009,ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
2TI_003_010,"ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,"
2TI_003_011,"ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು."
2TI_003_012,ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
2TI_003_013,"ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು."
2TI_003_014,ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು.
2TI_003_015,ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.
2TI_003_016,"ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ."
2TI_003_017,ಆದರಿಂದ ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
2TI_004_001,"ನಾನು ದೇವರ ಸಮಕ್ಷಮದಲ್ಲಿ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,"
2TI_004_002,"ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು."
2TI_004_003,ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
2TI_004_004,ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
2TI_004_005,"ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು."
2TI_004_006,ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
2TI_004_007,"ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ."
2TI_004_008,"ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು."
2TI_004_009,"ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,"
2TI_004_010,"ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು."
2TI_004_011,"ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ."
2TI_004_12-13,"ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ."
2TI_004_014,ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
2TI_004_015,"ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು."
2TI_004_016,"ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ."
2TI_004_017,"ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು."
2TI_004_018,ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
2TI_004_019,"ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, ಒನೇಸಿಪೊರನ ಮನೆಯವರಿಗೂ ವಂದನೆಹೇಳು."
2TI_004_020,ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
2TI_004_021,"ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ."
2TI_004_022,ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.